ಧ್ವನಿಯಿಂದ ಆರಂಭಿಸಿ, ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ವಿಸ್ತರಿಸುವುದು
ಇಂದು, ವಿಶ್ವದ ಎಲ್ಲ ಭಾಷೆಗಳಲ್ಲೂ ಕೃತಕ ಬುದ್ಧಿಮತ್ತೆ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುವ ಜಂಟಿ ಬದ್ಧತೆಗೆ OpenAI Foundation, ಗೇಟ್ಸ್ ಪ್ರತಿಷ್ಠಾನ ಮತ್ತು ಜಗತ್ತಿನಾದ್ಯಂತದ ಪಾಲುದಾರರೊಂದಿಗೆ ಕೈಜೋಡಿಸಿದೆ.
ಒಬ್ಬರು ಮಾತನಾಡುವ ಭಾಷೆಯ ಆಧಾರದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಪಡೆಯುವ ಅವಕಾಶವನ್ನು ನಿರ್ಬಂಧಿಸಬಾರದು. ಆದರೂ, ಬಹುಕಾಲದಿಂದ ತಂತ್ರಜ್ಞಾನದ ಸಮರ್ಪಕ ಬೆಂಬಲ ಸಿಗದ ಭಾಷೆಗಳನ್ನು ಮಾತನಾಡುವವರು ಸೇರಿದಂತೆ ಶತಕೋಟ್ಯಂತರ ಜನರಿಗೆ ಇಂದಿನ ಕೃತಕ ಬುದ್ಧಿಮತ್ತೆ ಮಾಡೆಲ್‌ಗಳು ಇನ್ನೂ ಅಷ್ಟೊಂದು ಸಮರ್ಥವಾಗಿಲ್ಲ ಅಥವಾ ಉಪಯುಕ್ತವಾಗಿಲ್ಲ.
ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ವ್ಯಾಪಕವಾಗಿ ಎಲ್ಲರಿಗೂ ಸಿಗುವಂತೆ ನೆರವಾಗಲು, ಸಂಪನ್ಮೂಲ ಕಡಿಮೆ ಇರುವ ಭಾಷೆಗಳಲ್ಲಿ ಮಾಡೆಲ್ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದನ್ನು ನಮ್ಮ ಕೆಲಸದ ಪ್ರಮುಖ ಆದ್ಯತೆಯಾಗಿಸಲು ಯೋಜಿಸಿದ್ದೇವೆ. ಮೊದಲು ಧ್ವನಿ ಆಧಾರಿತ ಕೃತಕ ಬುದ್ಧಿಮತ್ತೆಗೆ ಬೇಕಾದ ದತ್ತಾಂಶ ಮತ್ತು ಮೂಲಸೌಕರ್ಯದ ಮೇಲೆ ಕೆಲಸ ಆರಂಭಿಸುತ್ತೇವೆ. ಈ ಕ್ಷೇತ್ರದಲ್ಲಿ ಕಾರ್ಯಕ್ಷಮತೆ ಮತ್ತು ಲಭ್ಯವಿರುವ ದತ್ತಾಂಶದ ಕೊರತೆ ವಿಶೇಷವಾಗಿ ಹೆಚ್ಚಿದ್ದು, ಸಾಕಷ್ಟು ವಾಣಿಜ್ಯ ಹೂಡಿಕೆ ಸೆಳೆಯುವ ಸಾಧ್ಯತೆ ಕಡಿಮೆ ಇರುವ ಭಾಷೆಗಳಿಗೆ ಆದ್ಯತೆ ನೀಡುತ್ತೇವೆ.
ಅನೇಕ ಜನರಿಗೆ ಮಾತಿನ ಮೂಲಕ ತಂತ್ರಜ್ಞಾನ ಬಳಸುವುದೇ ಅತ್ಯಂತ ಸಹಜ ಮತ್ತು ಸುಲಭ ವಿಧಾನವಾಗಿದೆ. ಸಮರ್ಥ ಧ್ವನಿ ಮಾಡೆಲ್‌ಗಳು ನಮ್ಮ ಅನುದಾನ ಸ್ವೀಕರಿಸುವ ಸಂಸ್ಥೆಗಳು ಮತ್ತು ಇತರ ಅನೇಕ ಸಂಘಟನೆಗಳು ಇನ್ನೂ ಹೆಚ್ಚಿನ ಸಮುದಾಯಗಳಿಗೆ ಸೇವೆ ನೀಡಲು ನೆರವಾಗಬಹುದು. ಆರೋಗ್ಯ ಸೇವೆಗೆ ಕರೆ ಮಾಡುವ ರೋಗಿಯೊಬ್ಬರು ತಮ್ಮ ರೋಗಲಕ್ಷಣಗಳನ್ನು ವಿವರಿಸಿ, ಮುಂದಿನ ಪ್ರಶ್ನೆಗಳಿಗೆ ತಮ್ಮದೇ ಭಾಷೆಯಲ್ಲಿ ಉತ್ತರಿಸಿ, ಸೂಕ್ತ ಚಿಕಿತ್ಸಾ ಸೇವೆಯ ಸಂಪರ್ಕ ಪಡೆಯಬಹುದು. ರೈತರೊಬ್ಬರು ತಮ್ಮದೇ ಭಾಷೆಯಲ್ಲಿ ಪ್ರಶ್ನೆಯನ್ನು ಗಟ್ಟಿಯಾಗಿ ಕೇಳಿ, ತಮ್ಮ ಜಮೀನು ಮತ್ತು ಬೆಳೆಗೆ ಹೊಂದುವ ಬಿತ್ತನೆ ಸಲಹೆಯನ್ನು ಪಡೆಯಬಹುದು.
ವಿಶ್ವದ ಅತಿದೊಡ್ಡ ಸರ್ಕಾರೇತರ ಸಂಸ್ಥೆಯಾದ ಬ್ರ್ಯಾಕ್ಆಸಿಫ್ ಸಲೇಹ್ ಹೀಗೆ ಹೇಳುತ್ತಾರೆ: “ಬಾಂಗ್ಲಾದೇಶದಲ್ಲಿರುವ ನಮ್ಮ ಆರೋಗ್ಯ ಕಾರ್ಯಕರ್ತರಿಗಾಗಿ ಕೃತಕ ಬುದ್ಧಿಮತ್ತೆಯ ಲಿಪಿಕವನ್ನು ರೂಪಿಸಲು [ಬ್ರ್ಯಾಕ್] ಮುಂದಾದಾಗ, ಬಾಂಗ್ಲಾ ಭಾಷೆಯಲ್ಲಿ ಮಾಡೆಲ್‌ಗಳಿಗಿದ್ದ ಮಿತಿಗಳು ನಮ್ಮನ್ನು ತಡೆದವು. ನಾವು ಸೇವೆ ನೀಡುವ ಸಮುದಾಯಗಳಿಗೆ ಈ ತಂತ್ರಜ್ಞಾನವನ್ನು ಬಳಸಲು ಧ್ವನಿಯೊಂದೇ ಪ್ರಾಯೋಗಿಕ ಮಾರ್ಗ. ಹೀಗಾಗಿ ನಮ್ಮಂತಹ ಭಾಷೆಗಳಲ್ಲಿ ಅದನ್ನು ಸರಿಯಾಗಿ ರೂಪಿಸುವುದೇ, ನಾವು ತಲುಪುವ 14.5 ಕೋಟಿ ಜನರಿಗೆ ಕೃತಕ ಬುದ್ಧಿಮತ್ತೆ ನಿಜವಾಗಿಯೂ ಉಪಯುಕ್ತವಾಗುತ್ತದೆಯೇ ಅಥವಾ ಅಲ್ಪ ಪರಿಣಾಮವನ್ನಷ್ಟೇ ಬೀರುತ್ತದೆಯೇ ಎಂಬುದನ್ನು ನಿರ್ಧರಿಸುತ್ತದೆ.”
AGI ಇಡೀ ಮಾನವಕುಲಕ್ಕೆ ಪ್ರಯೋಜನಕಾರಿಯಾಗಬೇಕಾದರೆ, ಈ ಸವಾಲನ್ನು ಎದುರಿಸುವಲ್ಲಿ ಅರ್ಥಪೂರ್ಣ ಪ್ರಗತಿ ಸಾಧಿಸುವುದು ಅಗತ್ಯ. ಈ ಅಂತರವನ್ನು ನಿವಾರಿಸಲು ಬದ್ಧವಾಗಿರುವ ಸಂಸ್ಥೆಗಳು, ದೇಶಗಳು ಮತ್ತು ನಾಯಕರ ಒಕ್ಕೂಟದ ಭಾಗವಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ. ನಮ್ಮ ಪಾಲುದಾರರೊಂದಿಗೆ ಈ ಕಾರ್ಯವನ್ನು ಅಭಿವೃದ್ಧಿಪಡಿಸುತ್ತಾ ಹೋದಂತೆ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲು ಎದುರು ನೋಡುತ್ತಿದ್ದೇವೆ.
